Saturday, September 20, 2014

ಕನಸು-೨


ನಾನು ಒಬ್ಬನೇ ಅಲ್ಲ
 ಇಬ್ಬರಿದ್ದಾರೆ ನನ್ನೊಳಗೆ,
ನನ್ನೊಳಗಿನ ಯೋಚನೆಗಳಿಗೆರಡು
ದಿಕ್ಕು
ಭಾವಗಳ ಹರಿವೆಲ್ಲೆಡೆ
ಎರಡು ದಿಕ್ಕು
ನಾನು ಒಬ್ಬನೇ ಅಲ್ಲ
ಇಬ್ಬರಿದ್ದಾರೆ ನನ್ನೊಳಗೆ



ನನ್ನ ನಿನ್ನ ನಡುವೆ
ಇದ್ದದ್ದು ಏನು?
ಆಕರ್ಷಣೆ ಎಡೆಗಿನ ಪ್ರೀತಿಯೇ?
ಅಥವಾ
ಪ್ರಿತಿಯೆಡೆಗಿನ ಆಕರ್ಷಣೆಯೇ?
ಯಾರೂ ಹೇಳಲಾರರು
ನನಗೂ
ನಿನಗೂ
ಎಲ್ಲ ಕಥೆಗಳು ಇತಿಹಾಸ
ನಮ್ಮೊಳಗಿನ ಆಳ ಕಂದರಗಳಲ್ಲಿ
ನೆನಪುಗಳಷ್ಟೆ ಹುಗಿಯಲಾಗಿದೆ

Tuesday, September 2, 2014

ಮೊದಲ ಕವಿತೆ

ಗೆಳೆಯಾ,
ನನಗೆ ಕನಸುಗಳು ಬೇಕಿಲ್ಲ
ಏಕೆಂದು ಗೊತ್ತೇ?
ಸತ್ತ ಹೆಣಗಳೆಂದೂ ಕನಸು ಕಾಣುವುದಿಲ್ಲ
ಅವಳ ನೆನಪುಗಳ ಹುತ್ತ
ನನ್ನೊಳಗೆ ಬೆಳೆವಾಗ
ಬೇರೆ ಬದುಕಿನ ಹಸಿರು
ನಾನು ಕಾಣುವುದ್ಯಾವಾಗ?
ದಿನ ರಾತ್ರಿ ಗೊತ್ತಿಲ್ಲದಂತೆ
ನಿಶೆಯಲ್ಲಿರುವಾಗ?
ಚಿತ್ರಕೃಪೆ-ಅಂತರ್ಜಾಲ(ವ್ಯಾನ್ ಗೊ ನಾ ಸ್ಟಾರಿ ನೈಟ್)

Monday, September 1, 2014

ಆದರ್ಶನ ಬಗ್ಗೆ ಒಂದಿಷ್ಟು

ನಾನು ಈ ಬ್ಲಾಗನ್ನ ಅವತ್ತೇ ಶುರು ಮಾಡು ಅಂದಿದ್ದೆ...ಬರೆದಿದ್ದನ್ನ ಬಚ್ಚಿಟ್ಟುಕೊಳ್ಳುತ್ತಾ ದಿನೇ ದಿನೇ ಅಂತರ್ಮುಖಿಯಾಗುತ್ತಾ ಮರಳಿ ಬಾರದ ಲೋಕಕ್ಕೆ ಹೊರಟೇ ಹೋದ ಈ ನನ್ನ ಮುದ್ದು ತಮ್ಮ, ಒಂದು ಕಾಲಕ್ಕೆ ನನ್ನ ಮತ್ತು ನನ್ನ ಪ್ರೀತಿಯ ಹುಡುಗನ ನಡುವೆ ಸಂದೇಶದ ಕೊಂಡಿಯಾದವ...ಅವನ ಕನಸುಗಳೆದೆಷ್ಟಿದ್ದವೋ...ಅವನ ವಾಹನಕ್ಕೆ ಬಂದು ಗುದ್ದಿದ ಟ್ಯಾಂಕರಿಗೆ ಅದೊಂದು ಯುವ ಕತೆಗಾರನನ್ನ ಕವಿಯನ್ನ ಬಲಿತೆಗೆದುಕೊಂಡಿದ್ದೇನೆ ಅನ್ನೋ ಅರಿವೇ ಇರಲಿಲ್ಲವೇನೋ....ನನ್ನ ಚಿಕ್ಕಿ ಅತಿ ನೋವಿನಲ್ಲೇ ಹುಡುಕಿ ಇತ್ತ ಅವನ ಪುಟ್ಟ ಡೈರಿಯ ಮೊದಲ ಪುಟ ಹೀಗೆ ಹೇಳುತ್ತದೆ...
ಹುಟ್ಟಬೇಕು ಮತ್ತೆ ಸಾಯಲು
ಸಾಯಬೇಕು ಮತ್ತೆ ಹುಟ್ಟಲು
ಇದು ಮುಗಿಯದ ಆವರ್ತ

ಇನ್ನೂ ಅವನ ಕವಿತೆಗಳುಂಟು...ನೀವುಂಟು...